ಗ್ಯಾಬಾನ್-
ಆಫ್ರಿಕದ ಒಂದು ಗಣರಾಜ್ಯ. ಸಮಭಾಜಕ ವೃತ್ತದ ಮೇಲಿದೆ. ಗ್ಯಾಬಾನಿಗೆ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಉತ್ತರದಲ್ಲಿ ರಿಯೊಮುನಿ ಮತ್ತು ಕ್ಯಾಮರೂನ್, ಪೂರ್ವ - ದಕ್ಷಿಣಗಳಲ್ಲಿ ಕಾಂಗೊ ಇವೆ. ಗ್ಯಾಬಾನಿನ ವಿಸ್ತೀರ್ಣ 1,03,317 ಚಮೈ. ಜನಸಂಖ್ಯೆ 4,47,880 (1961). ರಾಜಧಾನಿ ಲೀಬ್ರವೀಲ್.

ಭೌತಲಕ್ಷಣ: ಗ್ಯಾಬಾನ್ ರಾಜ್ಯದ ಕರಾವಳಿ ಕಿರಿದಾಗಿದೆ; ಮರಳುಗಲ್ಲು ಮತ್ತು ಮೆಕ್ಕಲುಮಣ್ಣಿನಿಂದ ಕೂಡಿದೆ; ಉತ್ತರಕ್ಕೆ ಹೋದಂತೆ ಅಗಲವಾಗುತ್ತದೆ. ಲೋಪೆಜ್ ಭೂಶಿರಕ್ಕೆ ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರದ ಬೆಂಗ್ಯುಲ ಪ್ರವಾಹದಿಂದಾಗಿ ಮರಳುದಂಡೆಗಳೇರ್ಪಟ್ಟಿದೆ. ಈ ಕಡಲ ಪ್ರವಾಹ ಆಫ್ರಿಕದ ಅಂಚಿನಲ್ಲಿ ಉತ್ತರಾಭಿಮುಖವಾಗಿ ಸಾಗಿ, ನದಿಗಳು, ಸಾಗರಕ್ಕೆ ಬೀಳುವ ಕಡೆ ಮರಳುದಂಡೆಗಳು ಸುತ್ತುವರಿದ ಲಗೂನ್‍ಗಳನ್ನು ನಿರ್ಮಿಸಿದೆ. ಲೋಪೇಜ್ ಭೂಶಿರದ ಬಳಿ ತೀರ ಡೊಂಕಾಗಿದೆ. ಗ್ಯಾಬಾನ್ ನದಿ ಸಾಗರಕ್ಕೆ ಬೀಳುವ ಕಡೆ ವಿಶಾಲವಾದ ಅಳಿವೆಯುಂಟು. ರಾಜ್ಯದ ಒಳನಾಡಿದ ಮೇಲ್ಮೈ ಸಂಕೀರ್ಣವಾದ್ದು, ಉತ್ತರದಲ್ಲಿ ಸ್ಫಟಿಕಾಕಾರದ ಬಂಡೆಗಳಿಂದ ಕೂಡಿದ ಪರ್ವತಗಳ ನಡುವೆ ಉಲೆಯು, ನಟೆಮ್ ಮತ್ತು ಇವಿಂಡೊ ನದೀಬಯಲುಗಳಿವೆ. ದಕ್ಷಿಣದಲ್ಲಿ ಓಗೊವೇ ನದಿ ತಡಿಯಾಕಾರದ ಪರ್ವತಗಳ ನಡುವೆ ಹರಿಯುತ್ತದೆ. ಅಲ್ಲಿ ಮರಳುಗಲ್ಲು ಮತ್ತು ಖನಿಜ ಪದರ ಶಿಲೆಗಳು ಹೆಚ್ಚು; ಲಂಬಾರೇನೇ ಬಳಿ ಬೆಣಚುಕಲ್ಲುಗಳು ಹೇರಳ. ಸಾಗರತೀರದ ದಕ್ಷಿಣ ಭಾಗ ಬೆಟ್ಟ ಸೀಮೆ. ಇದರ ನೆರೆಯ ಬಯಲುಗಳಲ್ಲಿ ನ್ಯಾಂಗ ಮತ್ತು ನ್ಗೌನೀ ನದಿಗಳು ಹರಿಯುತ್ತವೆ. ನ್ಗೌನೀ ನದಿ ಓಗೊವೇಯ ಉಪನದಿ. ನ್ಗೌನೀ ಮತ್ತು ಓಗೊವೇ ನದಿಗಳ ನಡುವಣ ದಟ್ಟ ಪರ್ವತ ಶ್ರೇಣಿಯಲ್ಲಿ 5,165' ಎತ್ತರದ ಇಬೌಂಡ್ಜಿ ಪರ್ವತವಿದೆ. ಇದು ಗ್ಯಾಬಾನಿನ ಅತ್ಯಂತ ಎತ್ತರವಾದ ಪರ್ವತ.

ವಾಯುಗುಣ ಮತ್ತು ಸಸ್ಯ ಪ್ರಾಣಿಜೀವನ: ಗ್ಯಾಬಾನಿನದು ಸಮಭಾಜಕ ವೃತ್ತದ ವಾಯುಗುಣ. ಋತುಗಳ ವ್ಯತ್ಯಾಸ ಅಷ್ಟಾಗಿ ಕಂಡುಬರುವುದಿಲ್ಲ; ಉಷ್ಣತೆಯಲ್ಲೂ ಹೆಚ್ಚು ಬದಲಾವಣೆಗಳಿಲ್ಲ. ಇಡೀ ವರ್ಷ ಮಳೆ ಬೀಳುತ್ತದೆ. ಸಮುದ್ರದ ಬೆಂಗ್ಯುಲ ಶೀತೋದಕ ಪ್ರವಾಹದಿಂದಾಗಿ ಕರಾವಳಿಯಲ್ಲಿ ಉಷ್ಣತೆ ಮತ್ತು ಮಳೆ ಕಡಿಮೆ. ಒಳನಾಡಿನಲ್ಲಿ ಇವೆರಡೂ ಹೆಚ್ಚು. ಇಡೀ ರಾಜ್ಯ ನಿತ್ಯಹಸುರಿನ ಕಾಡುಗಳಿಂದ ಕೂಡಿದೆ. ಸುಮಾರು 3,000 ಜಾತಿಗಳ ಮರಗಳು ಇಲ್ಲಿವೆ. ಓಕೌಮೆ ಅಥವಾ ಗ್ಯಾಬಾನ್ ಮಹಾಗನಿ ವಾಣಿಜ್ಯಮೌಲ್ಯವುಳ್ಳದ್ದು. ಕರಾವಳಿಯಲ್ಲಿ ಗುಲ್ಮವೃಕ್ಷಗಳು ಅಧಿಕ. ಕೆಳ ಓಗೋವೇ ಪ್ರದೇಶದ ಸರೋವರದಲ್ಲಿ ಪಪೈರಸ್ ಸಾಮಾನ್ಯ. ಬಗೆಬಗೆಯ ಕೋತಿಗಳು, ಗೊರಿಲ, ಜಿಂಕೆ, ಕಾಡುಕೋಣ, ನೀರುಕುದುರೆ ಇವು ಇಲ್ಲಿಯ ವನ್ಯ ಮೃಗಗಳು.

ಜನಜೀವನ: ಗ್ಯಾಬಾನಿನಲ್ಲಿ ಸು. 4,000 ಮಂದಿ ಐರೋಪ್ಯರಿದ್ದಾರೆ. ಸ್ಥಳೀಯ ಜನರ ಪೈಕಿ ಕುಬ್ಜರು (ಪಿಗ್ಮಿ) ಸಣ್ಣ ಸಣ್ಣ ಗುಂಪುಗಳಲ್ಲಿ ಕಾಡಿನಲ್ಲಿ ಚದರಿದ್ದಾರೆ. ಬೇಟೆ, ಅಹಾರ ಸಂಗ್ರಹ - ಇವು ಇವರ ಜೀವನೋಪಾಯ. ಇಲ್ಲಿಯ ಜನರಲ್ಲಿ ತುಂಬ ಮುಂದುವರಿದವರಾದ ಮ್ಪಾಂಗ್ವೇಗಳು ವಿಶೇಷವಾಗಿ ಕರಾವಳಿಯಲ್ಲಿ ವಾಸಿಸುತ್ತಾರೆ. ಇವರು ಫ್ಯಾಂಗ್ ಜನರೊಂದಿಗೆ ಭಾಗಶಃ ಬೆರೆತಿದ್ದಾರೆ. ಈಶಾನ್ಯದಲ್ಲಿ ಬಕೋಟ ಮುಂತಾದ ತಂಡಗಳುಂಟು. ಈ ಜನ ಕ್ಯಾಮರೂನಿನ ಗುಂಪುಗಳೊಡನೆ ಸಂಬಂಧ ಹೊಂದಿದ್ದಾರೆ. ಮಧ್ಯಭಾಗದಲ್ಲಿ ಕಾಂಡ ಜನರಿದ್ದಾರೆ. ಇಲ್ಲಿಯ ಜನ ಮೂಲತಃ ಸರ್ವಚೇತನವಾದಿಗಳು. ಈಚೆಗೆ ಇಲ್ಲಿ ಕ್ರೈಸ್ತಮತ ಪ್ರಚಾರಕ್ಕೆ ಬಂದಿದೆ. ನೆಲದ ಒಡೆತನ ಸಾಮೂಹಿಕವಾಗಿದ್ದು, ಗುಂಪುಗಳ ಯಜಮಾನರು ಅದನ್ನು ನಿರ್ವಹಿಸುತ್ತಾರೆ. ಕಾಡುಗಳನ್ನು ಸುಟ್ಟು ಕೃಷಿ ಮಾಡುವ ಪದ್ಧತಿ ಇದೆ. ಉತ್ತರದ ಜನ ಫ್ಯಾಂಗ್ ಭಾಷೆ ಆಡುತ್ತಾರೆ. ಉಳಿದೆಡೆಗಳಲ್ಲಿ ಬಾಂಟು ಉಪಭಾಷೆಗಳು ಬಳಕೆಯಲ್ಲಿವೆ. ಫ್ರೆಂಚ್ ಅಧಿಕೃತ ಭಾಷೆಯಾಗಿ ಸ್ವೀಕೃತವಾಗಿದೆ. ಅದೇ ಸದ್ಯಕ್ಕೆ ಶಿಕ್ಷಣ ಮಾಧ್ಯಮ. 
ಆರ್ಥಿಕ ಪರಿಸ್ಥಿತಿ: ಕೃಷಿ ಇಲ್ಲಿಯ ಜನರ ಮುಖ್ಯ ಜೀವನೋಪಾಯ. ಬನಾನ, ಮರಗೆಣಸು, ಕೆಸವು ಮುಖ್ಯ ಉತ್ಪನ್ನಗಳು. ಸಮುದ್ರತೀರದಲ್ಲಿ ಮೀನುಗಾರಿಕೆಯೂ ಒಂದು ಮುಖ್ಯ 	ಕಸುಬು. ರಬ್ಬರ್, ಕೋಕೋ - ಇವು ಇಲ್ಲಿಯ ಈಚಿನ ಬೆಳೆಗಳು. ತಾಳೆ, ಎಣ್ಣೆ, ದಂತ, ಮರ ಇವು ಅರಣ್ಯೋತ್ಪನ್ನಗಳು. ಪೋರ್ಟ್ - ಜೆಂಟಿಲಿನಲ್ಲಿ ಪದರ ಹಲಗೆ (ಪ್ಲೈವುಡ್) ಕಾರ್ಖಾನೆಯುಂಟು. ಚಿನ್ನ, ವಜ್ರ, ಬಂಡೆಉಪ್ಪು, ಪೊಟಾಷ್, ಇಲ್ಲಿಯ ಮುಖ್ಯ ಖನಿಜಗಳು. ಲೋಪೆಜ್ ಭೂಶಿರ ಭಾಗದಲ್ಲಿ ಪೆಟ್ರೋಲಿಯಂ ಸಿಗುತ್ತದೆ. ಫ್ರಾನ್ಸ್‍ವೀಲ್ ಬಳಿ ಮ್ಯಾಂಗನೀಸ್ ನಿಕ್ಷೇಪಗಳಿವೆ. ಈಶಾನ್ಯದಲ್ಲಿರುವ ಮೆಕಾಂಬೊದಲ್ಲೂ ನೈಋತ್ಯದ ಟ್ವೆಬಾಂಗದಲ್ಲೂ ಕಬ್ಬಿಣ ಅದುರು ಉಂಟು. ಫ್ರಾನ್ಸ್‍ವೀಲ್ ಬಳಿ ಮೌನಾನದಲ್ಲಿ ಯುರೇನಿಯಂ ಸಿಗುತ್ತದೆ.	
ಗ್ಯಾಬಾನ್ ರಾಜ್ಯದ ಮುಖ್ಯ ಆಮದುಗಳು ಆಹಾರ ಮತ್ತು ಯಂತ್ರೋಪಕರಣ, ರಫ್ತುಗಳು ಚೌ ಬೀನೆ, ಪೆಟ್ರೋಲಿಯಂ, ತಾಳೆ, ಎಣ್ಣೆ ಮತ್ತು ತಿರುಳು, ಕೋಕೋ.

ಗ್ಯಾಬಾನಿನ ರಾಜಧಾನಿ ಲೀಬ್ರವೀಲ್. ಪೋರ್ಟ್ - ಜೆಂಟಿಲ್ ಮುಖ್ಯ ರೇವು ಪಟ್ಟಣ ಮತ್ತು ಕೈಗಾರಿಕಾ ಕೇಂದ್ರ. ನಡ್ಜೊಲೇ, ಮೌಯಿಲ, ಫ್ರಾನ್ಸ್‍ವೀಲ್ ಮತ್ತು ಲಂಬಾರೇನೇ - ಇವು ಇತರ ಪಟ್ಟಣಗಳು. ಲಂಬಾರೇನೇಯಲ್ಲಿ ಆಲ್ಬರ್ಟ್ ಷ್ವೀಟ್ಜ್‍ಜóರ್ 1913 ರಲ್ಲಿ ಆಸ್ಪತ್ರೆ ಸ್ಥಾಪಿಸಿದ್ದರು.

ಇತಿಹಾಸ: ಗ್ಯಾಬಾನಿನಲ್ಲಿ ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳ ಆಯುಧಗಳು ಸಿಕ್ಕಿವೆ. ಪ್ರಾರಂಭದಲ್ಲಿ ಮ್ಯೆನೇ ಭಾಷಾಗುಂಪಿನ ಜನ ತಳ ಓಗೊವೇ ನದೀ ಬಯಲು ಮತ್ತು ಸಾಗರತೀರದಲ್ಲಿ ಜೀವಿಸುತ್ತಿದ್ದರು. ಕಾಲಕ್ರಮದಲ್ಲಿ ಇತರ ಬಣಗಳು ಈ ಭಾಗಕ್ಕೆ ಬಂದುವು. 19 ನೆಯ ಶತಮಾನದ ಹೊತ್ತಿಗೆ ಮ್ಪಾಂಗ್ವೆ, ಮಿಟ್ಷೂಗೊ - ಓಕಂಡೆ, ಬಪುನ ಎಷಿರ, ಮ್ಬೇಡೆ - ಅಡುಮ - ಟೇಕೇ, ಫ್ಯಾಂಗ್ ಮತ್ತು ಬಕೇಲೇ ಬಣಗಳು ನೆಲೆಸಿದವು. 

ಪೋರ್ಚುಗೀಸ್ ನಾವಿಕರು ಸು. 1472 ರಲ್ಲಿ ಗ್ಯಾಬಾನ್ ಪಶ್ಚಿಮ ತೀರದ ಅಳಿವೆಯನ್ನು ಕಂಡುಹಿಡಿದು ಅದಕ್ಕೆ ಗ್ಯಾಬಾನ್ ಎಂದು ಹೆಸರಿಟ್ಟರು. ತರುವಾಯ ಲೋಪೊ ಗಾನ್‍ಸಾಲ್ವಿಸ್ ಎಂಬ ನಾವಿಕ ಲೋಪೆಜ್ ಭೂಶಿರವನ್ನು ಬಳಸಿದ. 1475 ರಲ್ಲಿ ರ್ಯು ಡಿ ಸೆಕ್ವೇರ 100 ಮೈ. ದಕ್ಷಿಣಕ್ಕಿರುವ ಸೇಂಟ್ ಕ್ಯಾದರೀನ ಭೂಶಿರವನ್ನು ಮುಟ್ಟಿದ. ಪೋರ್ಚುಗೀಸರು ಚೌಬೀನೆ ಮತ್ತು ದಂತ ವ್ಯಾಪಾರಕ್ಕಾಗಿ ನೆಲಸಿ ಅಲ್ಲಿಂದ ಗ್ಯಾಬಾನ್ ಶತಮಾನದಲ್ಲಿ ಡಚ್ಚರು ಕೊರಿಸ್ಕೊ ದ್ವೀಪದಲ್ಲಿ ನೆಲೆಸಿ ಅಲ್ಲಿಂದ ಗ್ಯಾಬಾನ್ ಅಳಿವೆಯನ್ನು ಸೂರೆ ಮಾಡಿದರು. ಇಂಗ್ಲೀಷರು ಫ್ರೆಂಚರು ವ್ಯಾಪಾರದಲ್ಲಿ ಪೈಪೋಟಿ ನಡೆಸಿದರೂ ಗ್ಯಾಬಾನಿನ ಸರಕುಗಳನ್ನು ಪೋರ್ಚುಗೀಸರೇ ಹೆಚ್ಚಾಗಿಕೊಂಡು ವ್ಯಾವಾರವನ್ನು ನಿಯಂತ್ರಿಸಿದ್ದರು. 1815 ರಲ್ಲಿ ಗುಲಾಮ ಮಾರಾಟವನ್ನು ಹೆಸರಿಗೆ ಮಾತ್ರ ರದ್ದು ಮಾಡಲಾಯಿತು. 1880 ರ ವರೆಗೆ ಇದು ನಡೆಯುತ್ತಲೇ ಇತ್ತು. ಮ್ಪಾಂಗ್ವೇ. ಓರುಂಗು ಮತ್ತು ಗ್ಯಾಲೋ ಬುಡಕಟ್ಟಿನ ವ್ಯಾಪಾರಿಗಳು ತಮ್ಮ ಬಣಗಳ ಜನರನ್ನು ಹಿಡಿದು ದೋಣಿಗಳಲ್ಲಿ ಸಾಗಿಸಿ ಸಾಗರತೀರದಲ್ಲಿ ಗುಲಾಮರನ್ನಾಗಿ ಮಾರುತ್ತಿದ್ದರು. ಅಲ್ಲಿಂದ ಇವರನ್ನು ಹಡಗುಗಳಲ್ಲಿ ವಿದೇಶಗಳಿಗೆ ಸಾಗಿಸಲಾಗುತ್ತಿತ್ತು. 1839 ರಲ್ಲಿ ಕ್ಯಾಪ್ಟನ್ ಎಲ್. ಇ. ಬಾಯೆಟ್ - ವಿಲಿಯಂಮೆಜ್ ಗುಲಾಮ ವ್ಯಾಪಾರವನ್ನು ತಡೆಯುವ ಕೆಲಸಕ್ಕೆ ನೇಮಿತನಾಗಿ ಗ್ಯಾಬಾನ್ ಅಳಿವೆಯ ಬಲದಂಡೆಯ ಬಣದ ನಾಯಕನೊಡನೆ ಒಪ್ಪಂದ ಮಾಡಿಕೊಂಡ; ಇನ್ನೊಬ್ಬ ನಾಯಕನಿಂದ ಎಡದಂಡೆಯನ್ನು ಪಡೆದುಕೊಂಡು ಅಲ್ಲಿ 1843 ರಲ್ಲಿ ಕೋಟೆಯೊಂದನ್ನು ಕಟ್ಟಿದ. 1842 - 44 ರ ಅವಧಿಯಲ್ಲಿ ಕ್ರೈಸ್ತ ಪಾದ್ರಿಗಳು ಅಲ್ಲಿ ನೆಲಸಿ ಕ್ರೈಸ್ತಧರ್ಮ ಪ್ರಚಾರ ಮಾಡತೊಡಗಿದರು. 1848ರಲ್ಲಿ ಈ ನೆಲೆ, ಕ್ಯಾಪ್ಟನ್ ಬಾಯೆಟ್ ವಿಲಿಯಂಮೆಜ್ó ಸ್ಥಾಪಿಸಿದ ಫ್ರೆಂಚ್ ಕೋಟೆ ಇವೆರಡನ್ನೂ ಸೇರಿಸಿ ಲೀಬ್ರವೀಲ್ ಎಂಬ ಹೆಸರಿಡಲಾಯಿತು.

1855 ರಲ್ಲಿ ಪಾಲ್ ಬಿ ಡ್ಯು ಚೈಲ್ಯು ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನಿಂದ ಗ್ಯಾಬಾನ್ ನದೀ ಮುಖಜ ಭೂಮಿಯನ್ನು ಪರಿಶೋಧಿಸಲು ನಿಯೋಜಿತನಾದ. ಅವನು ಇಲ್ಲಿ ಕುಬ್ಜರನ್ನೂ ಗೋರಿಲ್ಲಗಳನ್ನೂ ಕಂಡ; ನ್ಗೌನೇ ನದಿಯ ಮೇಲು ಪ್ರದೇಶಗಳತ್ತ ಸಂಚರಿಸಿದ. ಅಲ್ಲಿಯ ಪರ್ವತಶ್ರೇಣಿಗೆ ಅವನ ಹೆಸರನ್ನು ಕೊಡಲಾಗಿದೆ. 1867 ರಲ್ಲಿ ಭೂಪರಿಶೋಧಕ ಎ. ಎಂ. ಎ. ಏಮೆಸ್, 1873 ರಲ್ಲಿ ಬ್ರಿಟಿಷ್ ವ್ಯಾಪಾರಿ ಆರ್. ಬಿ. ಎನ್. ವಾಕರ್ ಇವರು ಓಗೊವೇ ನದಿಯ ಪ್ರವಾಹಕ್ಕೆ ಎದುರಾಗಿ ಸಂಚರಿಸಿ ಅದರ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಓಗೊವೇ - ಇವಿಂಡೊ ನದೀ ಸಂಗಮ ಸ್ಥಳವನ್ನು 1874 ರಲ್ಲಿ ಅಲ್‍ಫ್ರೆಡ್ ಮಾರ್ಚೆ ಮತ್ತು ಎಲ್. ಇ. ಎಚ್. ಡ್ಯುಪಾಂಟ್ ಮುಟ್ಟಿದರು. ಓಗೊವೇ ನದಿಯ ಮೂಲವನ್ನು 1877 ರಲ್ಲಿ ಪಿಯೆರ್ ಸವೊರ್ಗಾನ್ ಡಿ ಬ್ರಾಜಾ ತಲುಪಿದ. 1880 ರಲ್ಲಿ ಅವನು ಫ್ರಾನ್ಸ್‍ವೀಲ್ ಸ್ಥಾಪಿಸಿದ.
1886 ರಲ್ಲಿ ಗ್ಯಾಬಾನಿಗೆ ಫ್ರೆಂಚ್ ಗವರ್ನರೊಬ್ಬ ನೇಮಕನಾದ. ಅಗ ಇದು ಫ್ರೆಂಚ್ ಕಾಂಗೋಗೆ ಸೇರಿತ್ತು (1889 - 1904). ತರುವಾಯ ಅದು ಆಫ್ರಿಕ ಸಮಭಾಜಕವೃತ್ತೀಯ ಫ್ರೆಂಚ್ ಪ್ರಾಂತ್ಯವಾಯಿತು. ಗ್ಯಾಬಾನ್ ಮತ್ತು ಕ್ಯಾಮರೂನ್ ನಡುವಣ ಗಡಿಯನ್ನು 1885 ರಲ್ಲಿ ನಿರ್ಧರಿಸಲಾಯಿತು. ಸ್ಟ್ಯಾನಿಷ್ ಗಿನಿಯ ಕಡೆಯ ಗಡಿಯನ್ನು 1900 ರಲ್ಲಿ ಖಚಿತಗೊಳಿಸಲಾಯಿತು.

ಎರಡನೆಯ ಮಹಾಯುದ್ಧದಲ್ಲಿ ಸ್ವತಂತ್ರ ಫ್ರೆಂಚ್ ಪಡೆಗಳು ವಿಚಿ (ಫ್ರೆಂಚ್) ಸರ್ಕಾರದಿಂದ ಗ್ಯಾಬಾನನ್ನು ವಶಪಡಿಸಿಕೊಂಡವು. 1946 ರಲ್ಲಿ ಗ್ಯಾಬಾನ್ ಫ್ರಾನ್ಸಿನ ಸಾಗರಾಂತರ ಪ್ರದೇಶವಾಯಿತು. ಇದರ ಪ್ರಾಂತೀಯ ಸಭೆಗೆ 1957 ರಲ್ಲಿ ಚುನಾವಣೆ ನಡೆಯಿತು. 1958 ರಲ್ಲಿ ಗ್ಯಾಬಾನ್ ಫ್ರೆಂಚ್ ಬಂಧು ಕೂಟದೊಳಗೆ ಒಂದು ಸ್ವಯಮಾಡಳಿತ ಪ್ರದೇಶವಾಯಿತು. ಫ್ರಾನ್ಸಿನೊಂದಿಗೆ ಸಹಕಾರ ಒಪ್ಪಂದ ಮಾಡಿಕೊಂಡು 1960 ರ ಆಗಸ್ಟ್ 17 ರಂದು ಸ್ವಾಂತಂತ್ರ್ಯ ಘೋಷಿಸಿಕೊಂಡಿತು. 1960 ರ ನವೆಂಬರ್ 14 ರಂದು ಅಂಗೀಕರಿಸಲಾದ ಸಂವಿಧಾನದ ಪ್ರಕಾರ ಗ್ಯಾಬಾನ್ ಸಂಸದೀಯ ಪ್ರಜಾಸತ್ತೆಯಾಗಿದೆ.							
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ